ಮಾಸು	 -	
ಗರ್ಭಸ್ಥ ಕೂಸನ್ನು ತಾಯಿಯ ಗರ್ಭಕೋಶಕ್ಕೆ ಜಂಟಿಸುವ ಸಾಧನ (ಪ್ಲಸೆಂಟ). ಜನಸಾಮಾನ್ಯಕ್ಕೆ ತಿಳಿದಿರುವಂತೆ ಹೆರಿಗೆ ಆದಬಳಿಕ ಸಾಮಾನ್ಯವಾಗಿ 5ರಿಂದ 30 ಮಿನಿಟುಗಳಲ್ಲೆ ಯೋನಿದ್ವಾರದಿಂದ ಹೊರದೂಡಲ್ಪಡುವ ಅಂಗ ವಿಶೇಷ. ಪರ್ಯಾಯನಾಮಗಳು ಕಸ, ಸೆತ್ತೆ, ಜರಾಯು, ಮಗು ಹುಟ್ಟಿದ ಬಳಿಕ ಇದು ಹೊರಬರುವುದರಿಂದ ಇಂಗ್ಲಿಷಿನಲ್ಲಿ ಇದಕ್ಕೆ ಆಫ್ಟರ್ ಬರ್ತ್ ಎಂಬ ಹೆಸರುಂಟು. ಹೊಕ್ಕಳಬಳ್ಳಿಯನ್ನು ಕೊಯ್ದು ಮಗುವನ್ನು ಬೇರ್ಪಡಿಸಿದ ಮೇಲೆ ಉಳಿದುಕೊಂಡಿರುವ ಹೊಕ್ಕಳಬಳ್ಳಿಗೆ ಸೇರಿಕೊಂಡಿರುವಂತೆಯೇ ಹೊರಬರುವ ವರ್ತುಲಾಕಾರದ (14-18 ಸೆಂಮೀ ವ್ಯಾಸ ಹಾಗೂ ಮಧ್ಯದಲ್ಲಿ ಗರಿಷ್ಠ ದಪ್ಪ 2.3 ಸೆಂಮೀ) ತಟ್ಟೆಯಂತಿರುವ ಈ ರಚನೆ ಸ್ಪಂಜಿನಂತೆ ಅಗಾಧ ಪ್ರಮಾಣದಲ್ಲಿ ರಕ್ತವನ್ನು ತನ್ನ ರಕ್ತನಾಳಗಳಲ್ಲೂ ರಕ್ತಕೊಳ್ಳಗಳಲ್ಲೂ ಅಡಗಿಸಿಕೊಂಡಿರುತ್ತದೆ. ಇದರ ತೂಕ 500-1000 ಗ್ರಾಮ್; ಹುಟ್ಟಿದ ಮಗುವಿನ ತೂಕದ ಸುಮಾರು 1/10ರಷ್ಟಿರುತ್ತದೆ. ಹೊಕ್ಕಳಬಳ್ಳಿ ಇದರ ಕೇಂದ್ರದಲ್ಲಿ ಐಕ್ಯವಾಗುತ್ತದೆ. ಅಲ್ಲಿಂದ ಪರಿಧಿಯವರೆಗೂ ಇದು ದಪ್ಪವಾಗಿದ್ದು ಹಠಾತ್ತಾಗಿ ಆ ಅಂಚಿನಲ್ಲಿ ತೆಳುಪದರವಾಗಿ ಕಂಡುಬರುತ್ತದೆ. ಹೊಕ್ಕಳಬಳ್ಳಿ ಸೇರುವ ಮೈ ನುಣುಪು. ಆ ಮೈ ಅಡಿಯಲ್ಲಿ ಹೊಕ್ಕಳಬಳ್ಳಿಯಿಂದ ಬರುವ ಮತ್ತು ಅದಕ್ಕೆ ಸೇರಿಕೊಳ್ಳುವ ರಕ್ತನಾಳಗಳ ಕವಲುಗಳ ಸುತ್ತ ಎಲ್ಲ ದಿಕ್ಕುಗಳಲ್ಲೂ ಹರಡಿರುವುದು ಕಾಣಿಸುತ್ತದೆ. ವಾಸ್ತವವಾಗಿ ನುಣ್ಣನೆಯ ಈ ಹೊದಿಕೆ ಆಮ್ನಿಯಾನ್ ಎಂಬ ಭ್ರೂಣಾಶಯದ ಅವಶೇಷ. ಮಗು ಹುಟ್ಟುವಾಗ ಈ ಚೀಲ ಹರಿದುಹೋಗಿ ಒಳಗಿದ್ದ ದ್ರವ ತಾಯಿಯ ಯೋನಿಯ ಮೂಲಕ ಸೋರಿಹೋಗುವುದಷ್ಟೆ.. ಮಗು ಹುಟ್ಟಿದ ಮೇಲೆ ಈ ಹರಿದ ಚೀಲ ಒಳಗೇ ಉಳಿದುಕೊಂಡಿದ್ದು ಅಡಿಯಲ್ಲಿ ಮಾಸುವಿನ ಭಾಗವೇ ಆದ ಕೋರಿಯನ್ ಎಂಬ ಭ್ರೂಣಾಂಗಾಂಶ ಪೊರೆಗೆ ಅಂಟಿಕೊಂಡಂತೆಯೇ ಹೊರಬರುತ್ತದೆ. ಮಾಸುವಿನ ಇನ್ನೊಂದು ಮೈ ಒರಟು ಮತ್ತು ರಕ್ತಸಿಕ್ತ. ವಾಸ್ತವವಾಗಿ ಇದು ತಾಯಿಯ ಗರ್ಭಾಶಯ ಭಿತ್ತಿಯ ಭಾಗ. ಮಾಸು ವಿಸರ್ಜಿತವಾಗುವಾಗ ಈ ಸ್ಥಳದಿಂದ ಕಿತ್ತುಕೊಂಡು ಬರುವುದರಿಂದ ಅದರ ಆ ಮೈ ಒರಟಾಗಿಯೂ ರಕ್ತಸಿಕ್ತವಾಗಿಯೂ ಇರುತ್ತದೆ.

	ಗರ್ಭಕಾಲದಲ್ಲಿ ಮಾಸು ತಾಯಿಯ ಗರ್ಭಾಶಯ ಭಿತ್ತಿಯಲ್ಲಿ ಐಕ್ಯವಾಗಿರುವುದರಿಂದ ಅಲ್ಲಿ ಹರಿಯುತ್ತಿರುವ ತಾಯಿಯ ರಕ್ತ ಮತ್ತು ಭ್ರೂಣದ ರಕ್ತಗಳ ನಡುವೆ ಅನಿಲ ಹಾಘೂ ದ್ರಾವಣ ವಸ್ತುಗಳ ವಿನಿಮಯಕ್ಕೆ ಅವಕಾಶಮಾಡಿಕೊಡುತ್ತದೆ. ಭ್ರೂಣದ ವಿಕಸನ ಬೆಳೆವಣಿಗೆಗಳಿಗೂ ಬಹುಶಃ ಸಕಾಲದಲ್ಲಿ ಅದು ಜನಿಸಿ ಹೊರಬರುವುದಕ್ಕೂ ಇದು ಕಾರಣವಾಗಿದೆ. ಆಕ್ಸಿಜನ್, ಪೌಷ್ಠಿಕಾಂಶಗಳು. ಪ್ರತಿರೋಧಕವಸ್ತುಗಳು ಇತ್ಯಾದಿ ತಾಯಿಯ ರಕ್ತದಿಂದ ಮಗುವಿನ ರಕ್ತಕ್ಕೂ ಕಾರ್ಬನ್ ಡೈಆಕ್ಸೈಡ್, ಯೂರಿಯ ಮುಂತಾದ ವಿರ್ಜನ ವಸ್ತುಗಳು ಮಗುವಿನ ರಕ್ತದಿಂದ ತಾಯಿಯ ರಕ್ತಕ್ಕೂ ವರ್ಗಾವಣೆ ಆಗುವುದು ಮಾಸುವಿನ ಮಾಧ್ಯಮದ ಮೂಲಕವೇ. ಹೀಗೆ ಗರ್ಭಸ್ಥಕಾಲದಲ್ಲಿ ಕೂಸಿಗೆ ಫುಪ್ಫುಸ, ಕರುಳು ಹಾಗೂ ಮೂತ್ರಪಿಂಡಗಳ ಕಾರ್ಯಗಳನ್ನು ತಾತ್ಕಾಲಿಕವಾಗಿ ಮಾಸು ಪೂರೈಸುತ್ತಿರುತ್ತದೆ.

	ಮಾಸುವಿನ ವಿಕಸನ : ಮಾನವ ಪ್ರಜನನಕ್ರಿಯೆಯಲ್ಲಿ ಎಡ ಅಥವಾ ಬಲ ಯಾವುದೋ ಒಂದು ಅಂಡನಾಳದಲ್ಲಿ ಅಂಡಾಣು ಪುರುಷಾಣುಗಳ ಮಿಲನದಿಂದ ಭ್ರೂಣಾಣು ಫಲಿಸುವುದಷ್ಟೆ.. ಈ ಭ್ರೂಣಾಣು ಒಂದೆರಡು ದಿವಸಗಳಲ್ಲಿ ಗರ್ಭಾಶಯದ ಕಡೆಗೆ ಸಾಗುತ್ತ ಒಳಸೇರಿ ಅದರ ಒಳ ಮೈಮೇಲೆ ಸಾಧಾರಣವಾಗಿ ಗರ್ಭಾಶಯದ ಮಧ್ಯವಲಯದಲ್ಲಿ ನೆಲಸುತ್ತದೆ. ಮುಂದೆ 2 ವಾರಗಳಲ್ಲಿ ಸತತ ವಿಭಜನೆಗಳಿಂದ ಭ್ರೂಣಾಣು ಒಂದು ಕೋಶ ಸಮೂಹವಾಗಿಯೂ (ಮಾರ್ಯುಲ), ಅನಂತರ ದ್ವಿಕುಹರ ರಚನೆಯಾಗಿಯೂ (ಬೈವೆಸಿಕ್ಯುಲರ್ ಬ್ಲಾಸ್ಟೊಸಿಸ್ಟ್) ವಿಕಸನವಾಗುತ್ತದೆ. ಈ ರಚನೆಯ ಹೊರಮೈ ಕೋಶಗಳಲ್ಲಿ ವಿಶಿಷ್ಟ ಮಾರ್ಪಾಡು ಉಂಟಾಗಿ ರಚನೆಯ ಹೊರಮೈಮೇಲೆ ಎಲ್ಲೆಲ್ಲೂ ಬೆರಳಿನಾಕಾರದ ಚಾಚುಗಳು (ಕೋರಿಯಾನಿಕ್ ವಿಲ್ಲೈ) ಬೆಳೆದುಕೊಳ್ಳುತ್ತವೆ. ಇದೇ ಮಾಸುವಿನ ಪ್ರಾರಂಭ ಹಂತ. ಚಾಚುಗಳ ಹೊರಮೈ ಕೋಶಗಳು ತಾವು ಸಂಪರ್ಕಿಸುವ ಯಾವುದೇ ಅನ್ಯ ಅಂಗಾಂಶವನ್ನು ಕಬಳಿಸಿ ನಾಶಮಾಡಬಲ್ಲ ಸಾಮಥ್ರ್ಯ ಹೊಂದಿವೆ. ಇದರಿಂದಾಗಿ ದ್ವಿಕುಹರ ರಚನೆ ತಾನು ನೆಲಸಿರುವ ಗರ್ಭಾಶಯ ಭಿತ್ತಿಯನ್ನೆ ಕೊರೆದು ಅದರಲ್ಲಿ ಹುದುಗಿಕೊಳ್ಳುತ್ತದೆ. ಎರಡು ಮೂರು ವಾರಗಳಾಗುವಷ್ಟರಲ್ಲಿ ದ್ವಿಕುಹರ ರಚನೆ ಇನ್ನೂ ಬೆಳೆದು ವಿಕಸಿಸಿ ಭ್ರೂಣವೆನಿಸಿಕೊಳ್ಳುತ್ತದೆ. ಅದರ ಚಾಚುಗಳ ಒಳಕ್ಕೆ ಕೋರಿಯನ್ ಎಂಬ ಭ್ರೂಣಾಂಗಾಂಶವೂ ಭ್ರೂಣದ ರಕ್ತನಾಳಗಳು ಬೆಳೆದುಬರುತ್ತವೆ. ಚಾಚುಗಳು ಕವಲುಗೊಂಡು ಬೆಳೆಯುತ್ತ ಬಲೆಯಂತೆ ಹೆಣೆದುಕೊಳ್ಳುತ್ತದೆ. ಜೊತೆಗೆ ಇವುಗಳ ಸಂಪರ್ಕಕ್ಕೆ ಬರುವ ಗರ್ಭಾಶಯ ಭಿತ್ತಿಭಾಗ ನಾಶವಾಗುತ್ತಲೇ ಇರುತ್ತದೆ. ಗರ್ಭಾಶಯ ಭಿತ್ತಿಯಲ್ಲಿರುವ ರಕ್ತನಾಳಗಳನ್ನೂ ಇವು ಅಲ್ಲಲ್ಲಿ ಸಂಪರ್ಕಿಸುವುದರಿಂದ ಅವುಗಳ ಭಿತ್ತಿ ನಾಶವಾಗಿ ರಕ್ತ ಹೊರಬಂದು ಆ ಸ್ಥಳದಲ್ಲಿ ಕೊಳ್ಳದಂತೆ ತುಂಬಿಕೊಂಡು, ಹಾಗಾಗುವುದಕ್ಕೆ ಕಾರಣವಾದ ಭ್ರೂಣದ ಚಾಚುಗಳನ್ನು ಮುಳುಗಿಸಿಕೊಳ್ಳುತ್ತದೆ. ಇದೇ ತಾಯಿಯ ರಕ್ತ. ಸುಮಾರು ಈ ವೇಳೆಗೆ ಚಾಚುಗಳ ಹೊರಕೋಶಗಳು ಅನ್ಯ ಅಂಗಾಂಶಗಳನ್ನು ನಾಶಮಾಡುವ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತವೆ. ಹೀಗಾಗಿ ಕೆಲವು ಚಾಚು ಬಲೆಗಳು ಗರ್ಭಾಶಯ ಭಿತ್ತಿಯ ದಪ್ಪದಲ್ಲಿ ಹುದುಗಿ ಬೇರುಗಳಂತೆ ನೆಲೆನಿಲ್ಲುತ್ತವೆ. ಇನ್ನು ಕೆಲವು ಚಾಚು ಬಲೆಗಳು ಮೇಲೆ ಹೇಳಿರುವಂತೆ ತಾಯಿಯ ರಕ್ತಕೊಳ್ಳಗಳಲ್ಲಿ ಮುಳುಗಿರುತ್ತವೆ. ಈ ಒಟ್ಟು ರಚನೆಯೇ ಮಾಸು. ಅಂದ ಮೇಲೆ ಮಾಸು ಭಾಗಶಃ ತಾಯಿಯ ಗರ್ಭಾಶಯ ಭಿತ್ತಿಯ ಅಂಗಾಂಶಗಳಿಂದ ಮತ್ತು ಭಾಗಶಃ ಭ್ರೂಣದ ಅಂಗಾಂಶಗಳಿಂದ ರಚಿತವಾಗಿರುವುದು ಸ್ಪಷ್ಟ..

	ಇಷ್ಟುಹೊತ್ತಿಗೆ ಭ್ರೂಣದ ಹೊಕ್ಕಳಬಳ್ಳಿಯ ವಿಕಸನವಾಗಿ ಅದರ ಮೂಲಕ ಎರಡು ಅಪಧಮನಿಗಳು ಭ್ರೂಣದ ರಕ್ತವನ್ನು ಚಾಚುಗಳಿಗೆ ಪೂರೈಕೆ ಮಾಡುತ್ತವೆ. ಚಾಚುಗಳಿಂದ ಹಿಂತಿರುಗುವ ರಕ್ತವೆಲ್ಲ ಒಂದೇ ಅಭಿಧಮನಿಯ ಮೂಲಕ ಹೊಕ್ಕಳಬಳ್ಳಿಯ ಮಾರ್ಗವಾಗಿ ಭ್ರೂಣದ ಹೃದಯವನ್ನು ತಲಪುತ್ತದೆ. ಚಾಚುಗಳ ಒಳಗಿರುವ ರಕ್ತನಾಳಗಳಲ್ಲಿ ಪರಿಚಲಿಸುತ್ತಿರುವುದು ಭ್ರೂಣದ ರಕ್ತವೇ ಎಂಬುದು ವ್ಯಕ್ತ. ಈ ರಕ್ತನಾಳಗಳ ಭಿತ್ತಿಯೂ ಚಾಚುವಿನ (ಈ ಹೊತ್ತಿಗೆ ತಕ್ಕಷ್ಟು ಶಿಥೀಗೊಂಡಿರುವ) ಅಂಗಾಂಶವೂ ಭ್ರೂಣದ ರಕ್ತವನ್ನು ಕೊಳ್ಳಗಳಲ್ಲಿರುವ ತಾಯಿಯ ರಕ್ತದಿಂದ ಬೇರ್ಪಡಿಸುತ್ತವೆ.

	ಮಾಸು ವಸ್ತುವಿನಿಮಯ ಮಾಧ್ಯಮ ಒಂದೇ ಅಲ್ಲ. ಅದು ಒಂದು ನಿರ್ನಾಳ ಗ್ರಂಥಿಯೂ ಹೌದು. ಅದು ಸ್ರವಿಸುವ ಹಾರ್ಮೋನುಗಳು ನೇರವಾಗಿ ತಾಯಿಯ ರಕ್ತವನ್ನು ಸೇರಿ ತಾಯಿಯ ಜೈವಿಕಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ. ಗರ್ಭಧಾರಣೆ ಸಾಧ್ಯವಾಗಿ ಗರ್ಭಾವಸ್ಥೆ ಮುಂದುವರಿಯವುದು ಸುಮಾರು 12 ವಾರಗಳ ತನಕ-ತಾಯಿಯ ಅಂಡಾಶಯದಲ್ಲಿರುವ ಕಾರ್ಪಸ್ ಲೂಟಿಯಮ್ ಎಂಬ ರಚನೆಯ ಅಂತಃಸ್ರಾವವಾದ ಪ್ರೊಜೆಸ್ಟಿರೊನ್ ಎಂಬ ಹಾರ್ಮೋನಿನ ಪ್ರಭಾವದಿಂದ. ಗರ್ಭಧಾರಣೆ ಆದ ಮೇಲೆ ಸುಮಾರು ಮೂರು ತಿಂಗಳುಗಳು ಮಾತ್ರ ಈ ಕಾರ್ಪಸ್ ಲೂಟಿಯಮ್ ಉಪಸ್ಥಿತವಿದ್ದು ಅನಂತರ ನಶಿಸಿಹೋಗುತ್ತದೆ. ಆದ್ದರಿಂದ ಪ್ರೊಜೆಸ್ಟಿರೋನನ್ನು ಸ್ರವಿಸುವ ಅಂಗ ಬೇರೊಂದಿಲ್ಲದಿದ್ದರೆ 3 ತಿಂಗಳ ತರುವಾಯ ಗರ್ಭಾವಸ್ಥೆ ಮುಗಿದೇ ಹೋಗಬೇಕು. ಹೀಗಾಗದಂತೆ ಅರ್ಥಾತ್ ಗರ್ಭಾವಸ್ಥೆ 3 ತಿಂಗಳುಗಳ ಅನಂತರವೂ ಮುಂದುವರಿಯುವಂತೆ ಮಾಡುವ ಹೊಣೆ ಇಷ್ಟು ಹೊತ್ತಿಗೆ ವಿಕಸನವಾಗಿ ಉಪಸ್ಥಿತವಾಗಿರುವ ಮಾಸುವಿನದು. ಅದು ಸ್ರವಿಸುವ ಹಾರ್ಮೋನುಗಳಲ್ಲಿ ಒಂದಾದ ಪ್ರೊಜೆಸ್ಟಿರೋನ್ ಇನ್ನೂ ಸುಮಾರು 28 ವಾರಗಳ ಪರ್ಯಂತ ಸ್ರವಿಸಲ್ಪಡುತ್ತಿದ್ದು ಅಲ್ಲಿಯ ತನಕ ಒಟ್ಟು 40 ವಾರಗಳು ಗರ್ಭಾವಸ್ಥೆ ಮುಂದುವರಿಯುವಂತೆ ಮಾಸು ವರ್ತಿಸುತ್ತದೆ. ಇಷ್ಟು ಕಾಲಾನಂತರ ಕಾರಣಾಂತರಗಳಿಂದ ಮಸು ಅದರ ನೆಲೆಯಿಂದ ಬೇರ್ಪಡಿಸುವುದಕ್ಕೆ ಪ್ರಾರಂಭಿಸುತ್ತದೆ. ಬಹುಶಃ ಇದೇ ಕಾರಣದಿಂದ ಅದು ಸ್ರವಿಸುವ ಪ್ರೊಜೆಸ್ಟಿರೋನ್ ಕಡಿಮೆ ಆಗುತ್ತ ಬಂದು ಕೊನೆಗೆ ನಿಂತೇ ಹೋಗುತ್ತದೆ. ಗರ್ಭಾವಸ್ಥೆಯ ರಕ್ಷಣೆ ಇಲ್ಲದೆ ಅದು ಅಂತ್ಯವಾಗಿ ಮಗು ಜನಿಸುವಂತಾಗುತ್ತದೆ. ಮಾಸು ಸ್ರವಿಸುವ ರಿಲಾಕ್ಸಿನ್ ಎಂಬ ಇನ್ನೊಂದು ಹಾರ್ಮೋನು ಮಗುವನ್ನು ಸಲೀಸಾಗಿ ಪ್ರಸವಿಸಲು ತಾಯಿಯ ಮೇಲೆ ಪ್ರಭಾವ ಬೀರುವುದೂ ತಿಳಿದಿದೆ.

	ಗರ್ಭಾವಸ್ಥೆ ಮುಂದುವರಿದು ಅಂತ್ಯದಲ್ಲಿ ಪ್ರಸವವಾಗುವುದಕ್ಕೆ ಕಾರಣವಾದ ಪ್ರೊಜೆಸ್ಟಿರೋನೂ ಮೇಲೆ ಹೇಳಿದ ರಿಲಾಕ್ಸಿನ್ನೂ ಅಲ್ಲದೆ ಜರಾಯುವಿನಿಂದ ಪಿಟ್ಯುಯಿಟಿರಿಗ್ರಂಥಿಯ ಅಂತಃಸ್ರಾವಗಳನ್ನು ಹೋಲುವ ಹಾರ್ಮೋನುಗಳು ಸ್ರವಿಸಲ್ಪಡುತ್ತವೆ. ಕೋರಿಯಾನಿಕ್ ಗೊನೆಡೋಟ್ರೋಪಿನ್‍ಗಳೆಂಬ ಈ ಹಾರ್ಮೋನುಗಳು ಗರ್ಭಿಣಿಯ ಮೂತ್ರದಲ್ಲಿ ವಿಸರ್ಜಿತವಾಗುತ್ತಿರುತ್ತವೆ. ಗರ್ಭಿಣಿಯೆಂದು ಶಂಕಿಸಲಾದ ಸ್ತ್ರೀವ್ಯಕ್ತಿಯ ಮೂತ್ರ ಪರೀಕ್ಷೆ ಮಾಡಿ ಇವು ವಿಸರ್ಜಿತವಾಗುತ್ತಿವೆಯೇ ಎಂದು ಕಂಡುಕೊಂಡ ವ್ಯಕ್ತಿಯ ಗರ್ಭಾವಸ್ಥೆಯನ್ನು ಸ್ಥಿರೀಕರಿಸಬಹುದು ಇಲ್ಲವೇ ವ್ಯಕ್ತಿ ಗರ್ಭಿಣಿ ಆಗಿಲ್ಲವೆಂಬುದಕ್ಕೆ ಪುರಾವೆ ನೀಡಬಹುದು. ಮಾಸುವಿನ ವಿಕಸನದ ಪ್ರಾರಂಭ ಹಂತದಿಂದಲೇ, ಅಂದರೆ ದ್ವಿಕುಹರ ರಚನೆಯ ಮೈಮೇಲೆ ಚಾಚುಗಳು ಹೊಮ್ಮಿದಾಗಲೇ ಗರ್ಭಾಂಕುರವಾದ ಸುಮಾರು 2 ವಾರಗಳಷ್ಟು ಮುಂಚೆಯೇ, ಗರ್ಭಾವಸ್ಥೆಯ ಬೇರೆ ಚಿಹ್ನೆ ¯ಕ್ಷಣಗಳು ಕಾಣಬರುವುದಕ್ಕೆ ಮುಂಚೆಯೇ ಅರಿತುಕೊಳ್ಳಬಹುದು.

	ಕೆಲವು ಸಂದರ್ಭಗಳಲ್ಲಿ ಭ್ರೂಣ ಸತ್ತು ಮಾಸು ಮಾತ್ರ ಒಳಗೇ ಉಳಿದುಬಿಟ್ಟು ಏಡಿಗಂತಿಯಂತೆ ವರ್ತಿಸುವುದೂ ಇದೆ. ಇದು ಪ್ರಾಣಂತಕವಾದ ಸ್ಥಿತಿ. ಯುಕ್ತ ಕಾಲದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.

	ಮಾಸು ಗರ್ಭಾಶಯ ಭಿತ್ತಿಯ ಮಧ್ಯಪ್ರದೇಶದಲ್ಲಿಲ್ಲದೆ ಇನ್ನು ಕೆಳಗೆ ಅಂದರೆ ಗರ್ಭಾಶಯ ಕಂಠದ ಹತ್ತಿರ ಉಪಸ್ಥಿತವಾಗಿದ್ದರೆ ಪ್ರಸವ ಬಲು ಕಷ್ಟವಾಗಿ ತಾಯಿ, ಕೂಸು ಇಬ್ಬರಿಗೂ ಪ್ರಾಣಂತಕವಾಗಬಹುದಾಗಿದೆ. ಪ್ಲಸೆಂಟಪ್ರೀವಿಯ ಎಂಬ ಈ ಸ್ಥಿತಿಯಲ್ಲಿ ವಿನಾಕಾರಣ ಮತ್ತು ನೋವಿಲ್ಲದೆ ಗರ್ಭಕಾಲದ ಅಂತ್ಯವಾರಗಳಲ್ಲಿ ಗರ್ಭಿಣಿಯಿಂದ ಯೋನಿಯ ಮೂಲಕ್ಕೆ ಆಗಾಗ ರಕ್ತಸ್ರಾವವಾಗುತ್ತದೆ. ಇದು ಬಲುಮುಖ್ಯಚಿಹ್ನೆ. ಇದನ್ನು ಅರಿತು ಉದರ ಶಸ್ತ್ರಕ್ರಿಯೆಯಿಂದ ಪ್ರಸವಮಾಡಿಸುವುದರಿಂದ ತಾಯಿಮಗು ಇಬ್ಬರನ್ನೂ ಬದುಕಿಸಬಹುದು.
                                                                      (ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ